Telegram Join My Telegram WhatsApp Join My WhatsApp

RCB ಖರೀದಿ ರೇಸ್‌ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್: ದಾಖಲೆಯ ಬಿಡ್, ಉಳಿದ ನಾಲ್ವರು ಯಾರು?

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB). ಟ್ರೋಫಿ ಬರೋಬ್ಬರಿ 17 ಸೀಸನ್‌ಗಳ ನಂತರ ಬಂದರೂ, ತಂಡದ ಮೇಲಿನ ಅಭಿಮಾನಿಗಳ ಪ್ರೀತಿ ಎಂದಿಗೂ ಕಡಿಮೆಯಾಗಿಲ್ಲ. ಇದೇ ಕಾರಣಕ್ಕೆ RCB ಇಂದು ಜಾಗತಿಕ ಮಟ್ಟದಲ್ಲಿ ದೊಡ್ಡ ಬ್ರಾಂಡ್ ಆಗಿದೆ.

ಇಂತಹ RCB ತಂಡ ಮಾರಾಟದ ಹಂತದಲ್ಲಿರುವುದು ಈಗಾಗಲೇ ಎಲ್ಲರಿಗೂ ತಿಳಿದ ವಿಚಾರ. ಈ ಮಾರಾಟದ ಬಿಡ್ ರೇಸ್‌ನಲ್ಲಿ ಈಗ ಐವರು ಪ್ರಮುಖ ಹೂಡಿಕೆದಾರರು ಶಾರ್ಟ್‌ಲಿಸ್ಟ್ ಆಗಿದ್ದಾರೆ. ಈಗಾಗಲೇ ನಾಲ್ವರು ಬಿಡ್ ಸಲ್ಲಿಸಿದ್ದು, ಇದೀಗ ಇಂಗ್ಲಿಷ್ ಫುಟ್‌ಬಾಲ್ ಲೋಕದ ದಿಗ್ಗಜ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಕೂಡ ಅಧಿಕೃತವಾಗಿ ರೇಸ್‌ಗೆ ಇಳಿದಿದೆ.

ಮ್ಯಾಂಚೆಸ್ಟರ್ ಯುನೈಟೆಡ್‌ನ ದಾಖಲೆಯ ಬಿಡ್

RCB ಖರೀದಿಗೆ ಮ್ಯಾಂಚೆಸ್ಟರ್ ಯುನೈಟೆಡ್ ಸಹ ಮಾಲೀಕ ಅವ್ರಾಮ್ ಗ್ಲೇಜರ್ ಅವರು ದಾಖಲೆಯ ಮೊತ್ತದ ಬಿಡ್ ಸಲ್ಲಿಸಿದ್ದಾರೆ. ಸುಮಾರು 1.8 ಬಿಲಿಯನ್ ಡಾಲರ್, ಅಂದರೆ ಭಾರತೀಯ ಕರೆನ್ಸಿಯಲ್ಲಿ 15,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಅವರು ಆಫರ್ ಮಾಡಿದ್ದಾರೆ ಎನ್ನಲಾಗಿದೆ.

ಈ ಬಿಡ್‌ನಲ್ಲಿ RCB ಪುರುಷರ ಹಾಗೂ ಮಹಿಳೆಯರ ಎರಡೂ ತಂಡಗಳು ಸೇರಿವೆ. ವಿಶೇಷವೆಂದರೆ, RCB ಮಹಿಳಾ ತಂಡ ಈಗಾಗಲೇ ಎರಡು ಬಾರಿ WPL ಪ್ರಶಸ್ತಿ ಗೆದ್ದು ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ.

RCB ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ನಡುವೆ ಇರುವ ಹೋಲಿಕೆ ಒಂದೇ – ಎರಡೂ ತಂಡಗಳಿಗೂ ಅಪಾರ ಅಭಿಮಾನಿ ಬಳಗ ಮತ್ತು ಸೋಲು-ಗೆಲುವಿನಾಚೆಗೂ ನಿಂತು ಬೆಂಬಲಿಸುವ ಫ್ಯಾನ್ ಬೇಸ್. ಇದೇ ಕಾರಣಕ್ಕೆ ಗ್ಲೇಜರ್ ಕುಟುಂಬ RCB ಖರೀದಿಗೆ ಗಂಭೀರವಾಗಿ ಮುಂದಾಗಿದೆ ಎನ್ನಲಾಗಿದೆ.

RCB ಖರೀದಿ ರೇಸ್‌ನಲ್ಲಿ ಉಳಿದ ನಾಲ್ವರು ಯಾರು?

ಮ್ಯಾಂಚೆಸ್ಟರ್ ಯುನೈಟೆಡ್ ಮಾತ್ರವಲ್ಲದೆ, ಇನ್ನೂ ಕೆಲವು ದಿಗ್ಗಜ ಸಂಸ್ಥೆಗಳು RCB ಖರೀದಿಗೆ ಮುಂದಾಗಿವೆ.

  • ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್
    ಈಗಾಗಲೇ ಗುಜರಾತ್ ಜೈಂಟ್ಸ್ ತಂಡದ ಮಾಲೀಕರಾಗಿರುವ ಅದಾನಿ ಗ್ರೂಪ್, RCBಗೆ ಇರುವ ಭಾರೀ ಫ್ಯಾನ್ ಬೇಸ್ ನೋಡಿ ಗ್ಲೇಜರ್ ಬಿಡ್‌ಗಿಂತಲೂ ಹೆಚ್ಚು ಮೊತ್ತ ನೀಡಲು ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ.

  • ಸೌದಿ ಅರೇಬಿಯಾದ ಪಬ್ಲಿಕ್ ಇನ್ವೆಸ್ಟ್‌ಮೆಂಟ್ ಫಂಡ್ (PIF)
    ಫುಟ್‌ಬಾಲ್ ಮತ್ತು ಗಾಲ್ಫ್ ಸೇರಿದಂತೆ ಜಾಗತಿಕ ಕ್ರೀಡೆಯಲ್ಲಿ ಭಾರೀ ಹೂಡಿಕೆ ಮಾಡುತ್ತಿರುವ ಸೌದಿ ಸಂಸ್ಥೆ, RCB ಬ್ರ್ಯಾಂಡ್ ವ್ಯಾಲ್ಯೂ ನೋಡಿ ತಂಡ ಖರೀದಿಗೆ ಆಸಕ್ತಿ ತೋರಿದೆ.

  • ಜಿಂದಾಲ್ ಸೌತ್ ವೆಸ್ಟ್
    ಪಾರ್ಥ್ ಜಿಂದಾಲ್ ನೇತೃತ್ವದ ಈ ಸಂಸ್ಥೆಗೆ ಬೆಂಗಳೂರಿನೊಂದಿಗೆ ಹಳೆಯ ನಂಟಿದೆ. ಹಿಂದೆ ಬೆಂಗಳೂರು FC ತಂಡದ ಮಾಲೀಕತ್ವವೂ ಇವರಲ್ಲಿತ್ತು.

  • ಟಾಟಾ ಗ್ರೂಪ್ / CVC ಕ್ಯಾಪಿಟಲ್
    ಐಪಿಎಲ್‌ನ ಪ್ರಮುಖ ಪ್ರಾಯೋಜಕರಾಗಿರುವ ಟಾಟಾ ಗ್ರೂಪ್ ಹಾಗೂ ಜಾಗತಿಕ ಹೂಡಿಕೆ ಸಂಸ್ಥೆ CVC ಕ್ಯಾಪಿಟಲ್ ಕೂಡ RCB ಖರೀದಿಗೆ ತುದಿಗಾಲಿನಲ್ಲಿ ನಿಂತಿವೆ.

RCB ಮಾರಾಟದ ಅಂತಿಮ ನಿರ್ಧಾರ ಇನ್ನಷ್ಟೇ ಹೊರಬೀಳಬೇಕಿದೆ. ಆದರೆ ಈಗಲೇ ಸ್ಪಷ್ಟವಾಗಿರುವುದು ಒಂದೇ – RCB ಇಂದು ಕೇವಲ ಕ್ರಿಕೆಟ್ ತಂಡವಲ್ಲ, ಅದು ಜಾಗತಿಕ ಬ್ರಾಂಡ್.

Leave a Comment